ಚಾಂದ್ ಬೀಬಿ-
ದಕ್ಷಿಣ ಭಾರತದಲ್ಲಿ 1518ರಲ್ಲಿ ಕಲಬುರ್ಗಿಯ ಬಹುಮನೀ ರಾಜ್ಯ ಪತನವಾದಾಗ ಉದಯವಾದ ಐದು ರಾಜ್ಯಗಳ ಪೈಕಿ ಒಂದಾದ ಅಹಮದ್‍ನಗರದ ರಾಜಪುತ್ರಿ. ಈಕೆಯನ್ನು ವಿಜಾಪುರದ ಆಲಿ ಅದಿಲ್‍ಷಹನಿಗೆ ಲಗ್ನ ಮಾಡಿಕೊಟ್ಟಿತು. ಆಲಿ ಅದಿಲ್‍ಷಹ ಆದರ್ಶ ಅರಸ. ಆತನಿಗೆ ಕನ್ನಡ ಜಾಣ ಎಂಬ ಆಭಿದಾನವಿತ್ತು.

	ಅಲಿ ಆದಿಲ್‍ಷಹ ತೀರಿಕೊಂಡಾಗ, ರಾಣಿ ಚಾಂದ್ ಬೇಬಿ ತನ್ನ ಗಂಡನ ತಮ್ಮನ ಮಗನಾದ ಇಬ್ರಾಹಿಮ್ ಷಹನಿಗೆ ಪಟ್ಟಕಟ್ಟಿ ತಾನೇ ಆಡಳಿತಸೂತ್ರ ವಹಿಸಿದಳು. ಈಕೆಯ ಆಳ್ವಿಕೆ ಜನಪ್ರಿಯವಾಯಿತು. ತನ್ನ ವಜೀರ ಪುಂಡನಾಗಿದ್ದುದರಿಂದ ಅವನನ್ನು ತಳ್ಳಿ ಮತ್ತೊಬ್ಬನನ್ನು ವಜೀರನನ್ನಾಗಿ ನೇಮಿಸಿಕೊಂಡಳು. ಆತ ರಾಣಿಯನ್ನು ಕೈಸೆರೆ ಮಾಡಿ, ಸಾತಾರೆಯಲ್ಲಿಟ್ಟ. ಆದರೆ ಜನರು ಬಂಡಾಯ ಹೂಡಿ ಇವಳನ್ನು ಬಂಧಮುಕ್ತಳನ್ನಾಗಿ ಮಾಡಿದರು.			(ಎಸ್.ಎಂ.ಎಚ್.)

	ಈಕೆಯ ಸೋದರನಾದ ಬುರ್ಹಾನ್ ಉಲ್ ಮುಲ್ಕ್ ಅಹಮದ್‍ನಗರದ ಸುಲ್ತಾನನಾಗಿದ್ದ. ಆತ ತನ್ನ ಮಗ ಇಬ್ರಾಹಿಮ್ ತನ್ನ ಉತ್ತರಾಧಿಕಾರಿಯೆಂದು ನೇಮಿಸಿದಾಗ, ಆ ಆಯ್ಕೆಯನ್ನ ಅವನ ಸೇನಾನಾಯಕ ವಿರೋಧಿಸಿದ. ಪರಿಣಾಮವಾಗಿ ಅವರ ನಡುವೆ ತೀವ್ರ ಹೋರಾಟಗಳುಂಟಾದುವು. ಬುರ್ಹಾನನ ಮರಣಾನಂತರ ಇಬ್ರಾಹಿಮ್ ತನ್ನ ಅತ್ತೆಯಾದ ಚಾಂದ್ ಬೀಬಿಯ ಸಹಾಯದಿಂದ ಅಧಿಕಾರಾರೂಢನಾದರೂ ವಿಜಾಪುರದ ಅದಿಲ್‍ಷಹದೊಡನೆ ನಡೆದ ಒಂದು ಕದನದಲ್ಲಿ ಮಡಿದ (1595). ಈತನ ಮಗ ಬಹದೂರನನ್ನು ರಾಜ್ಯದ ವಾರಸುದಾರನೆಂದು ಚಾಂದ್ ಬೀಬಿ ಘೋಷಿಸಿ ಆತನಿಗೆ ಬೆಂಬಲವಾಗಿ ನಿಂತಳು. ಆದರೆ ಅಹಮದ್ ಎಂಬಾತ ಇದನ್ನು ತಿರಸ್ಕರಿಸಿ ಯುದ್ದಕ್ಕೆ ಅಣಿಯಾದ. ಅಹಮದ್ ನಗರದ ಈ ಆಂತರಿಕ ಕಲಹಗಳ ಉಪಯೋಗ ಪಡೆದು ಮೊಗಲ್ ರಾಜಕುಮಾರ ಮುರಾದ ಅಹಮದ್‍ನಗರದ ಮೇಲೆ ಏರಿ ಹೋದ. ಆಗ ಚಾಂದ್ ಬೀಬಿ ಸ್ವತಃ ರಣರಂಗಕ್ಕೆ ಇಳಿದಳು. ಕಲಿತನದಿಂದ ಕಾದಿ ಮೊಗಲ್ ಸೈನ್ಯದ ಒತ್ತಡವನ್ನು ಹಿಮ್ಮೆಟ್ಟಿಸಿದಳು. ಕೋಟೆಯನ್ನು ಭೇದಿಸಲು ಶತ್ರುಗಳು ಹೂಡಿದ ತಂತ್ರಗಳನ್ನು ನಾಶಗೊಳಿಸಿದಳಲ್ಲದೆ, ತನ್ನ ನಂಬುಗೆಯ ಸೇನಾಪತಿಗಳಾದ ಷಾ ಅಲಿ ಮತ್ತು ಅಭಂಗ್ ಖಾನರ ನೆರವಿನಿಂದ ಮೊಗಲರ ಸೈನ್ಯದ ಮೇಲೆ ಆಕ್ರಮಣ ಮಾಡಿದಳು. ಈ ವೇಳೆಗೆ ವಿಜಾಪುರದ ಸೈನ್ಯವೂ ಈಕೆಯ ಸಹಾಯಕ್ಕೆ ಧಾವಿಸಿತು. ಇನ್ನು ಕದನ ಹೂಡಿ ಫಲವಿಲ್ಲವೆಂದು ಬಗೆದ ಮುರಾದ ಒಪ್ಪಂದಕ್ಕೆ ಹಾತೊರೆದ. ಚಾಂದ್ ಬೀಬಿಯೂ ಇದಕ್ಕೆ ಸಿದ್ಧಳಾಗಿದ್ದುದರಿಂದ ತಾತ್ಕಾಲಿಕವಾಗಿ ಇಬ್ಬರ ನಡುವಣ ಹೋರಾಟಗಳು ಕೊನೆಗೊಂಡವು. ಬೀರಾರ್ ಕೋಟೆಯನ್ನು ಈಕೆ ಮೊಗಲರಿಗೆ ಒಪ್ಪಿಸಬೇಕಾಯಿತು.

	ಶತ್ರುವಿನ ಮುತ್ತಿಗೆಯ ಕಾಲದಲ್ಲಿ ಅಹಮದ್‍ನಗರದ ರಾಜಮನೆತನದವರ ಅಂತಃಕಲಹಗಳು ಸ್ವಲ್ಪ ಕಾಲ ನಿಂತಿದ್ದುವಾದರೂ, ಈ ಕದನ ನಿಲುಗಡೆ ಒಪ್ಪಂದವೇರ್ಪಟ್ಟ ಕೂಡಲೇ ಹಳೆಯ ವೈಮನಸ್ಯಗಳು ಪುನಃ ತಲೆ ಎತ್ತಿದುವು. ಮೊಗಲರ ಕಾಟದಿಂದ ದೂರವಿರಲು ಈಕೆ ರಾಜಧಾನಿಯನ್ನು ಜುನ್ನಾರ್‍ಗೆ ಸ್ಥಳಾಂತರಿಸಬಯಸಿದಳು. ಆದರೆ ಅಹಮದ್‍ನಗರವನ್ನು ಈಕೆ ಮೊಗಲರಿಗೆ ಹಸ್ತಾಂತರಿಸುತ್ತಿದ್ದಾಳೆಂದು ಈಕೆಯ ವಿರೋಧಿಗಳು ಅಪಪ್ರಚಾರ ಆರಂಭಿಸಿ, ಪ್ರಜೆಗಳು ಇವಳಲ್ಲಿ ಇರಿಸಿದ್ದ ನಂಬುಗೆ ಸಡಿಲಗೊಳ್ಳುವಂತೆ ಮಾಡಿದರು. ನೆಹಂಗ್ ಖಾನ್ ಎಂಬ ಈಕೆಯ ವಿರೋಧಿ ನಾಯಕ ಮೊಗಲರೊಡನೆ ಏರ್ಪಡಿಸಿಕೊಂಡಿದ್ದ ಒಪ್ಪಂದವನ್ನು ಉಲ್ಲಂಘಿಸಿ, ಇವಳ ಅನುಜ್ಞೆಯನ್ನು ಬದಿಗೆ ಸರಿಸಿ ಬೀರಾರಿಗೆ ಮುತ್ತಿಗೆ ಹಾಕಿದ. ಆದರೆ ಮೊಗಲರ ಸೈನ್ಯ ಇವನನ್ನು ಸೋಲಿಸಿ ಹಿಮ್ಮೆಟ್ಟಿತು.

	ಇಷ್ಟಾದರೂ ಚಾಂದ್ ಬೀಬಿಯ ವಿರೋಧಿಗಳು ಇವಳನ್ನು ದ್ವೇಷಿಸುತ್ತಲೇ ಇದ್ದರು. ರಾಜ್ಯದ ಹಿತಕ್ಕೆ ಮೊಗಲರೊಡನೆ ಸ್ನೇಹ ಅವಶ್ಯಕವೆಂಬ ಇವಳ ಅಭಿಪ್ರಾಯವನ್ನು ಈಕೆಯ ವಿರೋಧಿಗಳು ಅಲ್ಲಗಳೆದರು. 1600ರಲ್ಲಿ ಅಕ್ಬರನ ಸೈನ್ಯ ಅಹಮದ್‍ನಗರವನ್ನು ಮುತ್ತಿದಾಗ, ಈಕೆ ಒಪ್ಪಂದ ಮಾಡಿಕೊಳ್ಳುವ ಇಚ್ಚೆ ವ್ಯಕ್ತಪಡಿಸಿದಳು. ಇದಕ್ಕೆ ಇವಳ ಎಲ್ಲ ಜಾಗರೂಕತೆಯನ್ನೂ ವಹಿಸಿ ಹೋರಾಡುತ್ತಿದ್ದಾಗ, ಈಕೆಯ ಪಕ್ಷದವನೇ ಆದ ಜಿಲ್ಲಾ ಖಾನನೂ ಅವನ ಅನುಯಾಯಿಗಳೂ ಇವಳನ್ನು ಮೋಸದಿಂದ ಕೊಂದರು. ಇದರ ಫಲವಾಗಿ ನಗರ ಮೊಗಲರ ಕೈಸೇರಿತು.			(ಬಿ.ಬಿ.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ